ಭೂಪರಿಮಿತಿ -
ಭೂಹಿಡುವಳಿಗೆ ಗರಿಷ್ಟಮಿತಿಯ ನಿರ್ಧಾರ. ಇದು ಭೂಪರಿಮಿತಿಯ ಶಾಸನದ ಉದ್ದೇಶ. ಇದರ ಪ್ರಕಾರ ಯಾರೂ ಭೂಪರಿಮಿತಿಯನ್ನು ಮೀರಿ ಹಿಡುವಳಿಯನ್ನು ಇಟ್ಟುಕೊಳ್ಳುವಂತಿಲ್ಲ. ಭೂಪರಿಮಿತಿಗಿಂತ ಹೆಚ್ಚು ಭೂಮಿ ಇರುವವರಿಂದ ಹೆಚ್ಚುವರಿ ಭೂಮಿಯನ್ನು ತೆಗೆದುಕೊಂಡು ಅದನ್ನು ಚಿಕ್ಕಹಿಡುವಳಿಯ ಸಾಗುವಳಿದಾರರಲ್ಲಿ ಮತ್ತು ಭೂಮಿಯೇ ಇಲ್ಲದ ಕೃಷಿ ಕಾರ್ಮಿಕರಲ್ಲಿ ಹಂಚುವುದೂ ಸ್ವಂತಭೂಮಿಯನ್ನು ಸಾಗುವಳಿ ಮಾಡುವವರಿಗೆ ಮಾತ್ರವೇ ಭೂಮಿ ಸಿಗುವಂತೆ ಮಾಡುವುದೂ ಈ ಶಾಸನದ ಕಾರ್ಯಕ್ರಮ.

	ಹಿಂದೆ ಭೂಪರಿಮಿತಿಯುನ್ನು ನಿರ್ಧರಿಸುವಾಗ ವ್ಯಕ್ತಿಯನ್ನು ಗಮನಕ್ಕೆ ತೆಗೆದುಕೂಳ್ಳುತ್ತಿದ್ದರು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಒಂದು ಮಿತಿಯಲ್ಲಿ ಭೂಮಿಯನ್ನು ಹಿಡಿದಿಟ್ಟುಕೂಳ್ಳುವ ಅಧಿಕಾರ ಇತ್ತು. ಇದರಿಂದ ಕುಟುಂಬದ ಭೂಮಿಯ ಗಾತ್ರ ಹೆಚ್ಚುತ್ತಿತ್ತು. ಅಲ್ಲದೆ ಹಿಂದಿನ ಭೂಪರಿಮಿತಿ ಶಾಸನಗಳಲ್ಲಿ ಕೆಲವು ಪ್ರಕಾರದ ಭೂಮಿಗಳಿಗೆ ಉದಾಹರಣೆಗೆ ಉದ್ಯಾನಗಳು, ಗೋಮಾಳ, ಸಕ್ಕರೆ ಕಾರ್ಖಾನೆಗಳ ಕಬ್ಬು ಬೆಳೆಯುವ ಹೊಲಗಳು, ಯಾಂತ್ರೀಕೃತ ಹೊಲಗಳು ಸಹಕಾರಿ ಹೊಲಗಳು ಮತ್ತು ಖಾಸಗಿ ವಿಶ್ವಸ್ಥ ಮಂಡಳಿಗಳ ಜಮೀನುಗಳೇ ಮುಂತಾದವಕ್ಕೆ ಭೂಪರಿಮಿತಿ ಶಾಸನ ಅನ್ವಯಿಸುತ್ತಿರಲಿಲ್ಲ.

	ಭಾರತದ ಮುಖ್ಯಮಂತ್ರಿಗಳ ಸಮ್ಮೇಳನ (23-7-1972) ಭೂಪರಿಮಿತಿ ಕುರಿತು ಈ ಕೆಳಗಿನ ಶಿಫಾರಸುಗಳನ್ನು ಮಾಡಿತು. ಯಾವುದೇ ರಾಜ್ಯದಲ್ಲಿ ಭೂಪರಿಮಿತಿಯನ್ನು ನಿರ್ಧರಿಸುವಾಗ, ಭೂಮಿಯ ಫಲವಂತಿಕೆ ಮತ್ತು ಇತರ ಸಂಗತಿಗಳನ್ನು ಗಮನಿಸಬೇಕು. ನೀರಾವರಿ ಸೌಲಭ್ಯಗಳಿದ್ದು ಎರಡು ಬೆಳೆಗಳನ್ನು ಪಡೆಯಬಹುದಾದ ಅತ್ಯುತ್ತಮ ಭೂಮಿಗೆ ಭೂಪರಿಮಿತಿ 4 ರಿಂದ 7 ಹೆಕ್ಟೇರುಗಳು. ಒಂದೇ ಒಂದು ಬೆಳೆಯನ್ನು ಪಡೆಯುವ ಭೂಮಿಗೆ ಅದು ಸುಮಾರು 11 ಹೆಕ್ಟೇರುಗಳು. ಉಳಿದ ಪ್ರಕಾರದ ಎಲ್ಲ ಭೂಮಿಗೆ ಸುಮಾರು 22 ಹೆಕ್ಟೇರುಗಳು. ಮರುಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳ ಭೂಪರಿಮಿತಿಯನ್ನು ನಿರ್ಧರಿಸುವ ಅಧಿಕಾರ ರಾಜ್ಯಸರ್ಕಾರಗಳಿಗೆ ಸೇರಿದ್ದು. ಭೂಪರಿಮಿತಿ ಕುಟುಂಬದ ಭೂಮಿಗೆ ಅನ್ವಯಿಸಬೇಕು. ಕುಟುಂಬ ಎಂದರೆ ಗಂಡ ಹೆಂಡತಿ ಮತ್ತು ಅಪ್ರಾಯಸ್ಥ ಮಕ್ಕಳು. ಕುಟುಂಬದ ಸದಸ್ಯರ ಸಂಖ್ಯೆ ಐದನ್ನು ಮೀರಿದರೆ ಹೆಚ್ಚುವರಿ ಭೂಮಿಯನ್ನು ಪ್ರತಿಯೊಬ್ಬ ಹೆಚ್ಚುವರಿ ಸದಸ್ಯನಿಗೆ ನೀಡಬೇಕು. ಆದರೆ ಇಲ್ಲಿ ಈ ರೀತಿ ನೀಡಿದ ಭೂಮಿ ಕುಟುಂಬಕ್ಕೆ ಸಂಬಂಧಿಸಿದ ಭೂಪರಿಮಿತಿಯ ಎರಡರಷ್ಟು ಭೂಮಿಯನ್ನು ಮೀರಕೂಡದು. ಕುಟುಂಬ ಹೊಂದಿದ ಒಟ್ಟು ಭೂಮಿಯ ಮೊತ್ತಕ್ಕೆ ಭೂಪರಿಮಿತಿ ಅನ್ವಯಿಸುವುದು. ಭೂಪರಿಮಿತಿಯನ್ನು ನಿರ್ಧರಿಸುವಾಗ ಕುಟುಂಬದ ಪ್ರಾಯಸ್ಥ ಮಕ್ಕಳನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಲಾಗುತ್ತದೆ.

	ಭೂಪರಿಮಿತಿಗೆ ರಿಯಾಯಿತಿಗಳು: ಚಹಾ, ಕಾಫಿ, ರಬ್ಬರ್, ಏಲಕ್ಕಿ ಮತ್ತು ಕೋಕೋ ತೋಟಗಳಿಗೆ, ಭೂಧಾನ ಯಜ್ಞ ಸಮಿತಿ, ಸಹಕಾರಿ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಇಲ್ಲವೆ ರಾಜ್ಯ ಸರ್ಕಾರಗಳು ಮತ್ತು ಸ್ಥಾನಿಕ ಸಂಸ್ಥೆಗಳು ಇವುಗಳ ಭೂಮಿಗಳಿಗೆ, ಔದ್ಯಮಿಕ ಮತ್ತು ವಾಣಿಜ್ಯ ಸಂಸ್ಥೆಗಳ ಭೂಮಿಗೆ ಸಹಕಾರ ಬೇಸಾಯ ಸಂಘಗಳಿಗೆ ಸೇರಿದ ಭೂಮಿ, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಕಾಲೇಜುಗಳು, ಕೃಷಿ ಶಾಲೆಗಳು ಮತ್ತು ಸಂಶೋಧನ ಸಂಸ್ಥೆಗಳು ಇವುಗಳಿಗೆ ಸೇರಿದ ಭೂಮಿ, ಧಾರ್ಮಿಕ ಧರ್ಮಾರ್ಥ ಮತ್ತು ಸಾರ್ವಜನಿಕ ವಿಶ್ವಸ್ಥ ಮಂಡಳಿಗಳಿಗೆ ಸೇರಿದ ಜಮೀನುಗಳಿಗೆ ಭೂಪರಿಮಿತಿ ಶಾಸನದಿಂದ ರಿಯಾಯಿತಿಯನ್ನು ನಿರ್ಧರಿಸುವ ಮತ್ತು ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ಕಬ್ಬಿನ ಗದ್ದೆಗಳಿಗೆ ರಿಯಾಯಿತಿ ಸಲ್ಲದು. ಆದರೆ ಸಕ್ಕರೆ ಕಾರ್ಖಾನೆಗಳು ಸಂಶೋಧನೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ 40 ಹೆಕ್ಟೇರುಗಳಿಗೆ ಮಿಕ್ಕದಷ್ಟು ಭೂಮಿಯನ್ನು ಇಟ್ಟುಕೊಳ್ಳಬಹುದು. ಭೂ ಪರಿಮಿತಿಯ ನಿರ್ಧಾರಕ್ಕಾಗಿ ಅಸ್ತಿತ್ವದಲ್ಲಿರುವ ಉದ್ಯಾನಗಳನ್ನು ಒಣಭೂಮಿ ಎಂದು ಪರಿಗಣಿಸಬಹುದು. ತೆಂಗು ಮತ್ತು ಅಡಿಕೆ ತೋಟಗಳನ್ನು, ಬಾಳೆ ಬೆಳೆಯುವ ಭೂಮಿಯನ್ನು ಮತ್ತು ದ್ರಾಕ್ಷಿ ತೋಟಗಳನ್ನು ಉದ್ಯಾನಗಳೆಂದು ಪರಿಗಣಿಸಲಾಗದು. ರಾಷ್ಟ್ರೀಯ ಮಟ್ಟದಲ್ಲಿ ಪರಾಕ್ರಮ ತೋರಿಸಿದವರಿಗೆ ಭೂಮಿಯನ್ನು ಬಹುಮಾನವಾಗಿ ಕೊಡುವುದನ್ನು ಸಹ ನಿಲ್ಲಿಸಬೇಕು. ಈ ತಿದ್ದುಪಡಿ ಮಾಡಿದ ಭೂಪರಿಮಿತಿ ಶಾಸನ 1971 ಜನವರಿ 24ರ ಪೂರ್ವಾನ್ವಯ ಜಾರಿಗೆ ಬರುವಂತೆ ಮಾಡಬೇಕು. ಹೆಚ್ಚುವರಿ ಭೂಮಿಯನ್ನು ವಿತರಣೆ ಮಾಡುವಾಗ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗೆ ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ಭೂಮಿ ಇಲ್ಲದ ಕೃಷಿಕಾರ್ಮಿಕರಿಗೆ ಆದ್ಯತೆ ನೀಡಬೇಕು. ತಿದ್ದುಪಡಿ ಮಾಡಿದ ಭೂಪರಿಮಿತಿ ಶಾಸನಗಳನ್ನು ಜಾರಿಗೆ ತರುವ ಜವಾಬ್ದಾರಿ ಆಯಾ ರಾಜ್ಯಸರ್ಕಾರಗಳದ್ದು ಇತ್ಯಾದಿ.

	ಭಾರತದ ಭೂವ್ಯವಸ್ಥೆಯ ದೋಷಗಳನ್ನು ಕುರಿತು ಹೇಳುವಲ್ಲಿ ಆಸ್ತಿಯ ಅತಿಕೇಂದ್ರೀಕರಣ, ಕಡಿಮೆ ಭೂಉತ್ಪನ್ನತೆ. ಅಧಿಕ ಆರ್ಥಿಕ, ಸಾಮಾಜಿಕ ಅಸಮಾನತೆ ಇತ್ಯಾದಿಗಳಿದ್ದು ಇವನ್ನು ಹೋಗಲಾಡಿಸಲು ಭೂಸುಧಾರಣೆಯನ್ನು ಸಮಾನತೆಯ ಸಿದ್ಧಾಂತದ ಮೇಲೆ ರೂಪಿಸಬೇಕು ಎನ್ನುವವರಿದ್ದಾರೆ. ಸಮಾನತೆಯ ಸಿದ್ಧಾಂತದ ಮೇಲೆಯೇ ಭೂಪರಿಮಿತಿ ಶಾಸನ ಆಧಾರಿತವಾದರೆ ಇದರಿಂದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಗತಿ ಸಾಧಿಸಬಹುದು. ಭಾರತದಲ್ಲಿ ಭೂವಿತರಣೆ ಸಮರ್ಪಕವಾಗಿಲ್ಲ. ಒಟ್ಟು ಸಾಗುವಳಿದಾರರ ಶೇಕಡಾ 5ರಷ್ಟು ಮಾತ್ರ ಇರುವ ಅತಿದೊಡ್ಡ ಸಾಗುವಳಿದಾರರು ಒಟ್ಟು ಭೂಮಿಯ ಶೇಕಡಾ 30 ರಷ್ಟು ಅಧಿಕ ಭಾಗದ ಒಡೆಯರು. ಶೇಕಡಾ 40ರಷ್ಟು ಅಧಿಕ ಸಂಖ್ಯೆಯಲ್ಲಿ ಇರುವ ಸಣ್ಣ ಹಿಡುವಳಿದಾರರಾದರೋ ಕೇವಲ ಶೇಕಡಾ 10ರಷ್ಟು ಭಾಗದ ಒಡೆಯರು. ಇನ್ನು ಶೇಕಡಾ 20ರಷ್ಟು ಗ್ರಾಮೀಣ ಕುಟುಂಬಗಳಿಗೆ ಭೂಮಿಯೇ ಇಲ್ಲ.

	ಇದರಿಂದಾಗಿ ಕೃಷಿ ಆದಾಯದಲ್ಲಿ ಮತ್ತು ಉತ್ಪಾದನೆಯಲ್ಲಿ ಅಸಮತೆ ಹೆಚ್ಚು. ನಮ್ಮ ಶ್ರೀಮಂತಿಕೆ ಮತ್ತು ಬಡತನ ಭೂಮಿಯ ಅಸಮ ವಿತರಣೆಯಿಂದ ನಿರ್ಧಾರವಾಗಿದೆ ಎನ್ನಬಹುದು. ಗ್ರಾಮೀಣಭಾರತದಲ್ಲಿ ಸಂಪತ್ತು ಮತ್ತು ಆದಾಯಗಳಲ್ಲಿ ಅಸಮತೆ ಉಂಟಾದದ್ದು ಭೂಮಿಯ ಅಸಮ ವಿತರಣೆಯಿಂದಾಗಿ. ಹೀಗಾಗಿ ನಮಗೆ ಸಮಾಜವಾದೀ ಪದ್ಧತಿಯ ಸಮಾಜವನ್ನು ಸ್ಥಾಪಿಸುವುದು ಸಾಧ್ಯವಾಗಲಿಲ್ಲ. ಭೂಪರಿಮಿತಿ ಶಾಸನವನ್ನು ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಜಾರಿಗೆ ತಂದರೆ ನಮಗೆ ಸಮಾಜವಾದೀ ಪದ್ಧತಿ ಸಮಾಜವನ್ನು ನಿರ್ಮಿಸುವುದು ಸಾಧ್ಯ.

	ಭೂಪರಿಮಿತಿ ಪುಟ್ಟ ಕೃಷಿಕ ಸಮಾಜಕ್ಕೆ ಅನುವು ಮಾಡಿಕೊಡುತ್ತದೆ. ಸಾಗುವಳಿದಾರ ತಾನು ಸಾಗುವಳಿ ಮಾಡುವ ಭೂಮಿಯ ಒಡೆಯನಾದರೆ ಭೂಮಿಯನ್ನು ತುಂಬ ಉತ್ಸಾಹದಿಂದ ಸಾಗುವಳಿ ಮಾಡುತ್ತಾನೆ. ಅವನಲ್ಲಿರುವ ಶಕ್ತಿಯನ್ನೆಲ್ಲ ಸಾಗುವಳಿಗೆ ಸಮರ್ಪಿಸುತ್ತಾನೆ. ಭೂಸಾಗುವಳಿಯಲ್ಲಿ ಗರಿಷ್ಠ ಪ್ರತಿಫಲ ಪಡೆಯುತ್ತಾನೆ. ಪುಟ್ಟ ಬೇಸಾಯ ವ್ಯವಸ್ಥೆ ಭಾರತದಂಥ ದೈಹಿಕ ಶ್ರಮಾವಲಂಬಿತ ಅರ್ಥವ್ಯವಸ್ಥೆಗೆ ಹೊಂದುತ್ತದೆ. ಈ ಬೇಸಾಯಗಾರರು ಹೊಲಗಳಲ್ಲಿ ತಮ್ಮ ಕುಟುಂಬದ ಶ್ರಮವನ್ನೇ ಬಳಸಿಕೊಳ್ಳುತ್ತಾರೆ. ಇಲ್ಲಿ ಗರಿಷ್ಠ ಉದ್ಯೋಗ ಮತ್ತು ಉತ್ಪಾದನೆ ಸಾಧ್ಯ. ಭೂ ಪರಿಮಿತಿ ನೀತಿಧೋರಣೆ ಸಹಕಾರಿ ಬೇಸಾಯವನ್ನು ಪ್ರೋತ್ಸಾಹಿಸುತ್ತದೆ.

	ಭೂಪರಿಮಿತಿಗೆ ವಿರೋಧವಾಗಿ, ಕೆಲವರು ಭೂಮಿ ನಿಸರ್ಗದತ್ತ, ಉಳ್ಳವರಿಂದ ಕಿತ್ತು ಇಲ್ಲದವರಿಗೆ ಹಂಚಬಾರದು ಎನ್ನುತ್ತಾರೆ. ಭೂಪರಿಮಿತಿಯನ್ನು ಕನಿಷ್ಠ ಪರಿಮಿತಿಗೆ ಇಳಿಸಿದರೂ ಹಳ್ಳಿಯಲ್ಲಿರುವ ಪ್ರತಿಯೊಬ್ಬನಿಗೂ ಭೂಮಿ ಸಿಗುವಂತೆ ಮಾಡುವುದು ಸಾಧ್ಯವಿಲ್ಲ. ಇರುವಷ್ಟೇ ಭೂಮಿ. ಅದನ್ನು ಹೆಚ್ಚಿಸಲಾಗುವುದಿಲ್ಲ. ಅದರ ಪೂರೈಕೆ ವಿರಳ. ಆದ್ದರಿಂದ ಇಂಥ ಭೂಮಿಯನ್ನು ದಕ್ಷ ಬೇಸಾಯ, ಅಧಿಕ ಕೃಷಿ ಉತ್ಪಾದನೆ ಮತ್ತು ರಾಷ್ಟ್ರೀಯ ಕೃಷಿ ನೀತಿ ಮತ್ತು ಉದ್ದೇಶಗಳ ಸಾಧನೆ ದೃಷ್ಟಿಯಿಂದಲೇ ವಿತರಣೆ ಮಾಡಬೇಕು. ಚಿಕ್ಕ ಬೇಸಾಯಗಾರರಿಗೆ ಭೂಪರಿಮಿತಿ ಶಾಸನಗಳನ್ನು ಜಾರಿಗೆ ತಂದು ಹೆಚ್ಚಿನ ಭೂಮಿ ಸಿಗುವಂತೆ ಮಾಡಿದರೂ ಇಂಥ ಭೂಮಿಯನ್ನು ಸಾಗುವಳಿ ಮಾಡಲು ಬೇಕಾದ ಕೃಷಿ ಸೌಲಭ್ಯಗಳು ಅವರ ಬಳಿ ಇಲ್ಲದಾಗ ಉದ್ದೇಶ ಸಫಲವಾಗದು. ಭೂಪರಿಮಿತಿಯನ್ನು ಜಾರಿಗೆ ತಂದಾಗ ದೊಡ್ಡ ದೊಡ್ಡ ಹೊಲಗಳನ್ನು ತುಂಡು ಮಾಡಬೇಕಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ಬೇಸಾಯದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗಬಹುದು. ಇದರಿಂದ ಉತ್ಪಾದನೆ ಇಳಿದು ವೆಚ್ಚ ಹೆಚ್ಚುತ್ತದೆ. ಪುಟ್ಟ ಸಾಗುವಳಿದಾರರಿಗೆ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಬೇಕಾದ ಕಚ್ಚಾಸಾಮಾನು ಒದಗಿಸಲು ಸಾಧ್ಯವಾಗುವುದಿಲ್ಲ. ಭೂ ಪರಿಮಿತಿಯ ಜೊತೆಯಲ್ಲೇ ನಗರದ ಜನರ ಆದಾಯ ಮಿತಿಯನ್ನೂ ನಿರ್ಧರಿಸದೆ ಹೋದರೆ ಗ್ರಾಮೀಣ ಮತ್ತು ನಗರದ ಜನರ ಆಸ್ತಿ ಮತ್ತು ಆದಾಯದಲ್ಲಿ ಹೆಚ್ಚಿನ ಅಂತರ ಉಂಟಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಭೂಪರಿಮಿತಿ, ನಗರ ಪ್ರದೇಶಗಳಲ್ಲಿ ಆಸ್ತಿ ಮತ್ತು ಆದಾಯ ಇವುಗಳ ಮೇಲೆ ಮಿತಿ ನಿರ್ಧರಿಸುವುದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಸ್ತಿ ಮತ್ತು ಆದಾಯಗಳ ಅಂತರ ಕಡಿಮೆಯಾಗಬಹುದು.

	ಭೂಪರಿಮಿತಿ ಶಾಸನ ಜಾರಿಗೆ ಅಡಚಣೆಗಳು: ಭೂಪರಿಮಿತಿ ನೀತಿಯನ್ನು ಘೋಷಿಸುವುದೂ ಅದರ ಶಾಸನಗಳನ್ನು ಜಾರಿಗೆ ತಂದು ವಾಸ್ತವಿಕವಾಗಿ ಆಚರಣೆಗೆ ತರುವುದೂ ಬಹಳಷ್ಟು ಕಾಲ ಹಿಡಿಯುವ ಕೆಲಸ. ಈ ಅವಧಿಯಲ್ಲಿ ಭೂ ಮಾಲಿಕರು ತಮ್ಮ ಭೂಮಿಯನ್ನು ಅನ್ಯರಿಗೆ ವರ್ಗಾಯಿಸುತ್ತಾರೆ, ಮಾರುತ್ತಾರೆ. ಈ ಬಗೆಯಲ್ಲಿ ಭೂಪರಿಮಿತಿ ಶಾಸನ ತಮಗೆ ಅನ್ವಯಿಸದಂತೆ ನೋಡಿಕೊಳ್ಳುತ್ತಾರೆ ಹಾಗೂ ಕಾನೂನು ತೊಡಕುಂಟುಮಾಡುತ್ತಾರೆ. ಇದರಿಂದ ಭೂಪರಿಮಿತಿ ಶಾಸನವನ್ನು ಯಶಸ್ವಿಯಾಗಿ ಜಾರಿಗೆ ತರುವುದು ವಿಳಂಬವಾಯಿತು.

	ಭೂಪರಿಮಿತಿ ಶಾಸನ ಮಾಲೀಕತ್ವಕ್ಕೆ ಅನ್ವಯಿಸುತ್ತದೆ. ಅದು ಭೂಮಾಲಿಕರೇ ಸಾಗುವಳಿದಾರರಾದಾಗ ಅವರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಭೂಮಾಲೀಕರು ಗೇಣಿದಾರ ರೈತರಿಗೆ ವರ್ಗಾಯಿಸಿದ್ದ ತಮ್ಮ ಜಮೀನನ್ನು ತಿರುಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಈ ಭೂಪರಿಮಿತಿ ಶಾಸನಗಳಲ್ಲಿ ರಿಯಾಯಿತಿ ಹೆಚ್ಚಿದ್ದು ರಾಜ್ಯ ಸರಕಾರದ ಶಾಸನಗಳು ಧನಿಕರಿಗೇ ಅನುಕೂಲವಾಗುವಂತೆ ಇದ್ದುದರಿಂದ ಭೂಪರಿಮಿತಿ ಶಾಸನಗಳನ್ನು ಜಾರಿಗೆ ತಂದರೂ ಮಿಕ್ಕ ಹೆಚ್ಚುವರಿ ಭೂಮಿ ಸಿಗಲಿಲ್ಲ.

	ಭೂಪರಿಮಿತಿ ಶಾಸನಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕೆನ್ನುವ ಉದ್ದೇಶ ಇದ್ದರೂ ಸರಿಯಾದ ಭೂದಾಖಲೆಗಳ ಕೂರತೆಯಿಂದಾಗಿ ಮತ್ತು ಕೆಲವು ರಾಜ್ಯಗಳ ಅದಕ್ಷ ಮತ್ತು ಪಕ್ಷಪಾತಿ ಆಡಳಿತ ನಿರ್ವಾಹಕರ ಪಕ್ಷಪಾತ ಧೋರಣೆಯಿಂದಾಗಿ ಅನೇಕ ಸಂದರ್ಭಗಳು ಭೂಪರಿಮಿತಿ ಶಾಸನ ಭೂಮಾಲಿಕರಿಗೆ ಪ್ರಯೋಜನವಾಗುವಂತೆ ಆಯಿತು. ಇಂಥ ಭೂ ಮಾಲಿಕರು ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಮ್ಮ ಗೆಳೆಯರ ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿದರು. ಇದರಿಂದಾಗಿ ಭೂಪರಿಮಿತಿ ಶಾಸನಗಳನ್ನು ಮೂಲ ಉದ್ದೇಶಕ್ಕೆ ಅನುಗುಣವಾಗಿ ಜಾರಿಗೆ ತರಲು ಸಾದ್ಯವಾಗಲಿಲ್ಲ. ದೇಶದ ರಾಜಕೀಯ ವಾತಾವರಣ ಮತ್ತು ಪರಿಸ್ಥಿತಿ ಪ್ರೋತ್ಸಾಹಕಾರಿಯಾಗಿರದದ್ದು ಮುಖ್ಯ ಕಾರಣ.

	ಇಷ್ಟೆಲ್ಲ ತೊಂದರೆ ಅಡಚಣೆಗಳಿದ್ದರೂ ಭಾರತದ ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳನ್ನು ಬಿಟ್ಟು ಉಳಿದ ಎಲ್ಲಾ ರಾಜ್ಯಗಳಲ್ಲಿ ಇಂದು ಭೂಪರಿಮಿತಿ ಶಾಸನಗಳನ್ನು ಜಾರಿಗೆ ತರಲಾಗಿದೆ. ಮೇಘಾಲಯ ಮತ್ತು ನಾಗಾಲ್ಯಾಂಡಿನಲ್ಲಿ ಸಮುದಾಯ ಭೂಮಾಲೀಕತ್ವವಿದೆ. ಪಂಜಾಬಿನ ಭೂಪರಿಮಿತಿ ಶಾಸನವನ್ನೇ ಚಂದೀಗಡಕ್ಕೆ ಅನ್ವಯಿಸಲಾಗಿದೆ. ಭೂಪರಿಮಿತಿ ಶಾಸನಗಳ ಯಶಸ್ವೀ ಅನುಷ್ಠಾನಕ್ಕೆ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಜನ ಮಂಡಳಿಗಳು ಇರಬೇಕು. ಹೊಸ ಭೂಮಾಲಿಕರ ನೋಂದಾವಣಿಯನ್ನು ಸರಳಗೊಳಿಸಬೇಕು. ವಿತರಣೆಗಾಗಿ ಹೆಚ್ಚು ಮಿಗತೆ ಭೂಮಿ ಸಿಗಬೇಕು. ಪುಟ್ಟ ಸಾಗುವಳಿದಾರರು ತಾವು ಪಡೆದ ಭೂಮಿಯಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುರಲ್ಲೇ ಈ ಭೂಪರಿಮಿತಿ ಶಾಸನದ ಜಾರಿಯ ಯಶಸ್ಸು ಅಡಗಿದೆ ಮತ್ತು ಭೂಪರಿಮಿತಿಯ ಶಾಸನದ ಯಶಸ್ವೀ ಜಾರಿಗೆ ರಾಜಕೀಯ ಬೆಂಬಲವೂ ಅಗತ್ಯವೆನ್ನಬಹುದು.				
	(ಡಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ